ಮುತ್ತು
ಮೃದ್ವಂಗಿಗಳ (ಮಾಲಸ್ಕ) ಗುಂಪಿಗೆ ಸೇರಿದ, ಮುತ್ತಿನ ಸಿಂಪಿ (ಪರ್ಲ್ ಆಯ್‍ಸ್ಟರ್) ಎಂಬ ಪ್ರಾಣಿಗಳು ಆಶ್ರಯ ಪಡೆಯಲು ತಮ್ಮ ದೇಹದ ಮೇಲ್ಬಾಗ ಇಲ್ಲವೆ ಒಳಭಾಗವನ್ನು ಬಂದು ಸೇರುವ ಪರಾವಲಂಬಿ ವಸ್ತುವಿನ ಸುತ್ತಲೂ ತಮ್ಮ ಶರೀರದಲ್ಲಿ ಉತ್ಪತ್ತಿಯಾಗುವ ಧೃತಿಯನ್ನು (ನೇಕರ್) ತೆಳುಪದರು ಪದರುಗಳಾಗಿ ಲೇಪನಗೈಯ್ಯುವುದರಿಂದ ಉಂಟಾಗುವ, ಹೆಚ್ಚು ಕಡಿಮೆ ದಂಡನೆಯ ಆಕಾರದ, ನಸುಬಿಳಿಬಣ್ಣದ, ಮುದ್ದೆಗೊಂಡಿರುವ, ಹೊಳಪುಳ್ಳ ನೈಸರ್ಗಿಕ ಜೈವಿಕೋತ್ಪನ್ನ (ಪರ್ಲ್). ಬಲುಬೆಲೆಬಾಳುವ ನವರತ್ನಗಳ ಪೈಕಿ ಒಂದು. ಭಾರತದಲ್ಲಿ ವೇದಗಳ ಕಾಲದಿಂದಲೂ ಖ್ಯಾತಿದೀಪ್ತಿಯನ್ನು ಬೆಳಗಿ ಬಂದಿರುವ ಮುತ್ತುಗಳಿಗೆ ಪ್ರಪಂಚಾದ್ಯಂತ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಇದೆ. ಆದಿಮಾನವ ತನ್ನ ಜೀವನೋಪಾಯಕ್ಕಾಗಿ ನೀರಿನಲ್ಲಿ ದೊರಕುತ್ತಿದ್ದ ಚಿಪ್ಪು ಪ್ರಾಣಿಗಳನ್ನು ಸಂಗ್ರಹಿಸಿ ಅವನ್ನು ತಿನ್ನಲು ಯತ್ನಿಸಿದಾಗ ಅವುಗಳ ದೇಹದೊಳಗೆ ಕಾಂತಿಯಿಂದ ಹೊಳೆಯುತ್ತಿದ್ದ ಮುತ್ತುಗಳನ್ನು ಕಂಡ. ಹೀಗಾಗಿ ಮುತ್ತುಗಳ ಪೆರುಗಿಗೆ, ಕಾಂತಿಗೆ ಜನ ಆಕರ್ಷಿತರಾಗಿದ್ದಾರೆ.
ರಸಾಯನವೃತ್ತಾಂತ: ಮುತ್ತಿನಲ್ಲಿರುವ ರಾಸಾಯನಿಕವಸ್ತುಗಳ ಪೈಕಿ ಮುಖ್ಯವಾದುದೆಂದರೆ ಕ್ಯಾಲ್ಸಿಯಮ್ ಕಾರ್ಬೋನೆಟ್ (ಸುಮಾರು 92%). ಜೈವಿಕವಸ್ತು (ಸುಮಾರು 6%) ಮತ್ತು ನೀರಿನಾಂಶಗಳೂ (ಸುಮಾರು 2%) ಇವೆ. ಕ್ಯಾಲ್ಸಿಯಮ್ ಕಾರ್ಬೋನೇಟ್ ಎಂಬುದು ಆರ್ಥೊರಾಂಬಿಕ್ ಸ್ಫಟಿಕಾಕೃತಿಯಲ್ಲಿ ರೂಪುಗೊಳ್ಳುವ ಅರಗೋನೈಟ್ ಖನಿಜ. ಕೆಲವು ವೇಳೆ ಅರಗೋನೈಟ್‍ಗೆ ಬದಲು ಕ್ಯಾಲ್ಸೈಟ್ ಖನಿಜ ಸ್ಫಟಿಕೀಕರಣಗೊಂಡಿರುತ್ತದೆ. ಇವೆರಡೂ ಖನಿಜಗಳು ಬೆಳ್ಳಿಯಂತೆ ಹೊಳಪುಳ್ಳವು. ಮುತ್ತಿನ ಕಾಠಿಣ್ಯ (ಮೋಹೊ ಮಾನಕದ ರೀತ್ಯಾ) 2.5 ರಿಂದ 4.5 ಇದನ್ನು ಸೂಜಿ, ನಾಣ್ಯ ಅಥವಾ ಚಾಕುವಿನಿಂದ ಗೀರಿದರೆ ಇದರ ಮೇಲೆ ಗೆರೆಬೀಳುತ್ತದೆ. ಸಾಪೇಕ್ಷಸಾಂದ್ರತೆ 1.91 ರಿಂದ 2.76. ಯಾವುದೇ ಆಮ್ಲವಾದರೂ ಮುತ್ತಿಗೆ ಸೋಕದಂತೆ ಎಚ್ಚರವಹಿಸಬೇಕು. ಸೋಕಿದರೆ ಕರಗಿ ಹೋಗುತ್ತದೆ. ಆಮ್ಲದ ಅನಿಲಗಳು ತಾಗಿದರು ಕೂಡ ಮುತ್ತು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಮುತ್ತನ್ನು ಸುಟ್ಟರೆ ಭಸ್ಮವಾಗಿ ಸುಣ್ಣದ ಪುಡಿ ಹಿಂದಕ್ಕೆ ನಿಲ್ಲುತ್ತದೆ. ಶ್ರೀಮಂತರು ಮುತ್ತಿನ ಭಸ್ಮಕ್ಕೆ ನೀರು ಸೇರಿಸಿ ಸುಣ್ಣದಂತೆ ಮಾಡಿಕೊಂಡು ಎಲೆ ಅಡಕೆಯೊಂದಿಗೆ ಹಾಕಿಕೊಳ್ಳುವ ರೂಢಿ ಉಂಟು. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲೂ ಮುತ್ತಿನ ಭಸ್ಮವನ್ನು ಬಳಸುವುದಿದೆ.
ಮುತ್ತು ಸಾಮಾನ್ಯವಾಗಿ ಬೆಳ್ಳಿಯಂತೆ ಬಿಳಿಯ ಬಣ್ಣದ, ಹೊಳಪುಳ್ಳ ಪದಾರ್ಥ, ಕೆಲವು ವೇಳೆ ನಸುಹಳದಿ, ಬೂದು, ನೀಲಿ, ಹಳದಿ, ನೇರಳೆ, ಹಸುರು, ಧೂಮ್ರವರ್ಣ ಮುಂತಾದ ಬಣ್ಣಗಳನ್ನೂ ಹೊಂದಿರುವುದುಂಟು. ಗುಲಾಬಿ ಛಾಯೆಯಿಂದ ಕೂಡಿರುವ, ಭಾರತದ ಮುತ್ತಿಗೆ ಪ್ರಪಂಚದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಇದೆ. ಕೆಲವೊಮ್ಮೆ ವಿವಿಧಬಣ್ಣಗಳ ಸೂಕ್ಷ್ಮಹೊಳಪು ಮುತ್ತಿನ ಹೊರಪದರದ ಮೇಲೆ ಕಂಡುಬರುತ್ತದೆ. ಗಾತ್ರದಲ್ಲಿಯೂ ಮುತ್ತುಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿವೆ. ಅತಿ ಕಡಿಮೆ ತೂಕವುಳ್ಳ ಮುತ್ತು ಒಂದು ಕಣದ (ಗ್ರೇನ್) ತೂಕದ 1/4 ಭಾಗಕ್ಕಿಂತಲೂ ಕೊಂಚ ಕಡಿಮೆ ತೂಕದ್ದಾಗಿರುತ್ತದೆ. ಇಂಥ ಮುತ್ತುಗಳು ಒಂದು ಔನ್ಸಿಗೆ ಸುಮಾರು 9,000 ಸಮವಾಗುತ್ತವೆ. ಇವಕ್ಕೆ ಬೀಜ ಮುತ್ತುಗಳು (ಸೀಡ್ ಫಲ್ರ್ಸ್) ಎಂದು ಹೆಸರು. ಇಲ್ಲಿಯ ತನಕ (1987) ದೊರೆತಿರುವ ಅತಿ ದೊಡ್ಡ ಮುತ್ತಿನ ತೂಕ 1860 ಗ್ರಾಮ್‍ಗಳು. ಇದು ಅಸಮರೂಪದ ವಿಕೃತಮುತ್ತು. ಗುಣಗಳಲ್ಲಿ ಎಲ್ಲ ಮುತ್ತುಗಳು ಒಂದೇ ತೆರನಾಗಿ ಹಾಗೂ ಒಂದೇ ಸಮನಾಗಿ ಇರುವುದಿಲ್ಲ. ಆಸ್ಟ್ರಿಯ ಎಡ್ಯುಲಿಸ್ ಎಂಬ ಮೃದ್ವಂಗಿಯಲ್ಲಿ ಉತ್ಪತ್ತಿಯಾದ ಮುತ್ತು ಬಲು ಹೊಳಪಿನಿಂದ ಕೂಡಿ ಎರಡು ಪದರಗಳನ್ನು ಒಳಗೊಂಡಿರುತ್ತದೆ. ಮೂರು ಪದರುಗಳನ್ನು ಒಳಗೊಂಡಿರುವ ಮುತ್ತುಗಳು ತಮ್ಮ ಚಿಪ್ಪಿನ ಮೇಲೆ ಹೊಳಪಿನ ಪೊರೆಯನ್ನು ಹೊಂದಿರುತ್ತವೆ. ರತ್ನ ವ್ಯಾಪಾರಿಗಳು ಇಂಥ ಮುತ್ತುಗಳನ್ನು ಅತಿಶಯವಾಗಿ ಬಯಸುತ್ತಾರೆ. ಎಷ್ಟೋ ವೇಳೆ ಎರಡು ಅಥವಾ ಇನ್ನೂ ಹೆಚ್ಚು ಮುತ್ತುಗಳು ಒಂದಕ್ಕೊಂದು ಕೂಡಿಕೊಂಡು ಜೋಡಿ ಅಥವಾ ಸಂಯುಕ್ತ ಮುತ್ತುಗಳಾಗುತ್ತವೆ.
ಮುತ್ತುಗಳ ಉತ್ಪತ್ತಿ: ನೀರಿನ ಮಡುವುಗಳಲ್ಲಿ ಮೃದ್ವಂಗಿ ತನ್ನ ಶರೀರದಲ್ಲಿ ಉತ್ಪತ್ತಿಯಾಗುವ ಧೃತಿಯೊಂದರಿಂದ ಆತ್ಮರಕ್ಷಣೆಗಾಗಿ ಚಿಪ್ಪನ್ನು ಉತ್ಪತ್ತಿಮಾಡಿ ಗೂಡು ಕಟ್ಟಿಕೊಂಡು ಜೀವಿಸುತ್ತಿರುತ್ತದೆ. ಮನುಷ್ಯನಿಗೆ ಹೇನು ಮತ್ತು ಕೂರೆಗಳು ಕಾಟಕೊಡುವ ರೀತಿಯಲ್ಲಿ ಮೃದ್ವಂಗಿಯ ದೇಹದೊಳಕ್ಕೆ ಸಣ್ಣ ಪ್ರಾಣಿಯೊಂದು ನುಸುಳಿ ಬಾಧೆಯನ್ನು ಕೊಡಲು ಪ್ರಾರಂಭಿಸುತ್ತದೆ. ಆ ಪ್ರಾಣಿಯ ಕಾಟವನ್ನು ನಿವಾರಿಸಿಕೊಳ್ಳಲು ಮೃದ್ವಂಗಿ ತನ್ನ ಶರೀರದಲ್ಲಿ ಉತ್ಪತ್ತಿಯಾಗುವ ಧೃತಿಯನ್ನು ಪರಾವಲಂಬಿಯ ಸುತ್ತಲೂ ಪದರು ಪದರುಗಳಾಗಿ ಲೇಪನ ಮಾಡುತ್ತ ಹೋಗಿ ಕೊನೆಗೆ ಆ ಪ್ರಾಣಿಯ ಗೋರಿಯನ್ನೇ ನಿರ್ಮಿಸುತ್ತದೆ. ಹೀಗೆ ಧೃತಿಯ ಲೇಪನ ಪದರು ಪದರುಗಳಾಗಿ ಬೆಳೆದು ಕ್ರಮೇಣ ಒಂದು ಸೊಗಸಾದ, ಮುದ್ದೆಗೊಂಡ ಮುತ್ತಾಗುತ್ತದೆ. ಶರೀರವನ್ನು ಒಳಹೊಕ್ಕ ಪದಾರ್ಥ ಜೈವಿಕಪರಾವಲಂಬಿಯೇ ಆಗಲಿ ಮರಳು, ಮಣ್ಣು ಮುಂತಾದ ನಿರ್ಜೀವ ವಸ್ತುವೇ ಆಗಲಿ ಮೃದ್ವಂಗಿ ಅದರ ಸುತ್ತಲೂ ಮುತ್ತಿನ ಚಿಪ್ಪಿನ ಪದಾರ್ಥದಿಂದ ಸುತ್ತುಗಟ್ಟುತ್ತ ಕಾಂತಿಯುಕ್ತ ಮುತ್ತಿಗೆ ಎಡೆಮಾಡಿಕೊಡುತ್ತದೆ.
ಮೃದ್ವಂಗಿಗಳು ಉತ್ಪಾದಿಸಿದ ಮುತ್ತುಗಳು ಮಾತ್ರ ವರ್ಣಸ್ಫುರಣ ಮತ್ತು ಪಾರದರ್ಶಕ ಗುಣಗಳಿಂದ ಕೂಡಿರುತ್ತದೆ. ಇವನ್ನು ಆಭರಣಗಳಲ್ಲಿ ಅಳವಡಿಸುವುದಿದೆ. ಕೆಲವು ಸ್ತನಿಗಳು ಮತ್ತು ಕೀಟಗಳು ಕೂಡ ತಮ್ಮ ಹೊರಕವಚದಲ್ಲಿ ಮುತ್ತನ್ನು ಯಥಾರೀತಿ ಹೋಲುವ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಇಂಥ ಮುತ್ತುಗಳು ನಸುಗೆಂಪು ಮತ್ತು ಪಿಂಗಾಣಿ ಬಿಳಿ ಬಣ್ಣದಿಂದ ಕೂಡಿದ್ದು ಹೆಚ್ಚಿನ ಹೊಳಪನ್ನು ಹೊಂದಿರುವುದಿಲ್ಲ. ಕಡಿಮೆ ಬೆಲೆಯುಳ್ಳ ಇಂಥ ಮುತ್ತುಗಳಿಗೆ ಬೆಡಗು ಮುತ್ತುಗಳು (ಫ್ಯಾನ್ಸಿ ಪಲ್ರ್ಸ್) ಎಂದು ಹೆಸರು. ಪ್ರಶಸ್ತಮುತ್ತುಗಳ ಬೇರೆಯಾದರೋ 1928 ಮತ್ತು 1929ರಲ್ಲಿ ಅತ್ಯಧಿಕವಾಗಿ ಏರಿ ನವರತ್ನಗಳ ಬೆಲೆಯ ಸರಿಸುಮಾರಿಗೆ ನಿಲುಕಿತ್ತು. ಅತ್ಯಂತ ಹೆಚ್ಚು ಬೆಲೆಬಾಳುವ ಮುತ್ತುಗಳನ್ನು ಮೆಲಿಯಾಗ್ರಿನ ವರ್ಗಕ್ಕೆ ಸೇರಿದ ಮೃದ್ವಂಗಿಗಳು ಉತ್ಪಾದಿಸುತ್ತದೆ.
ಸಾಮಾನ್ಯವಾಗಿ ಮುತ್ತನ್ನು ಉತ್ಪಾದಿಸುವ ಜೀವಕಣಗಳು ಮೃದ್ವಂಗಿಯ ಕರುಳು ಮತ್ತು ನವಜೀವಕಣಗಳಿಂದ ಆದ ಚರ್ಮದ ಹೊರಮಡಿಕೆಗಳಲ್ಲಿ ಇರುತ್ತವೆ. ಪರಾವಲಂಬಿ ಅಥವಾ ಪರವಸ್ತು ಮೃದ್ವಂಗಿಯ ದೇಹದಲ್ಲಿ ಕರುಳಿನವರೆಗೂ ಒಳಹೊಕ್ಕಾಗ ಅದರ ಸುತ್ತಲೂ ಮೊದಲು ಚೀಲದಂಥ ತೆಳುಪೊರೆಯ ನಿರ್ಮಾಣವಾಗಿ ಮುತ್ತಿನ ಬೆಳೆವಣಿಗೆ ಆ ಚೀಲದೊಳಗೆ ಮುಂದುವರಿಯುತ್ತದೆ. ಇದಕ್ಕೆ ಮುತ್ತಿನ ಚೀಲ ಎಂದು ಹೆಸರು. ಈ ಬೆಳೆವಣಿಗೆ ಮುತ್ತಿನ ಚೀಲದ ಕುತ್ತಿಗೆ ಭಾಗವನ್ನು ಆಕ್ರಮಿಸಿಕೊಳ್ಳುವ ತನಕ ನಡೆದು ಬರುತ್ತದೆ. ಹೀಗೆ ಬೆಳೆದ ಮುತ್ತುಗಳು ಏಕಕೇಂದ್ರಕಬಿಂದುವಿನೊಡಗೂಡಿ ದುಂಡಾಗಿಯೂ ಕೆಲವೊಮ್ಮೆ ಅಂಡಾಕಾರ, ಕಿತ್ತಳೆ ಹಣ್ಣು ಅಥವಾ ನಿಂಬೆಹಣ್ಣಿನಾಕಾರವಾಗಿಯೂ ಇರುತ್ತವೆ. ಇವು ಸುಂದರವಾದ, ಅಧಿಕ ಕಾಂತಿಯುಳ್ಳ, ಧೃತಿಲೇಪನವನ್ನು ಹೊಂದಿರುವ ಪ್ರಶಸ್ತ ಮುತ್ತುಗಳೆನಿಸುತ್ತವೆ. ಮೃದ್ವಂಗಿಯ ಕರುಳು ಭಾಗದಲ್ಲಲ್ಲದೆ ಅದರ ದೇಹದ ಚಿಪ್ಪು ಮುಂತಾದ ಭಾಗಗಳ ಮೇಲೆ ಪರಾವಲಂಬಿ ನೆಲೆಸಿದರೆ, ಮುತ್ತಿನ ಲೇಪನಗಳಿಂದ ಉಂಟಾದ ಮುತ್ತುಗಳ ಕೆಳಭಾಗ ಚಪ್ಪಟೆಯಾಗಿಯೂ ಮಿಕ್ಕಭಾಗ ಮಂಡಾಗಿಯೂ ಇರುತ್ತದೆ. ಇಂಥವಕ್ಕೆ ಬೊಬ್ಬೆಯಾಕಾರದ ಮುತ್ತುಗಳು (ಬ್ಲಿಸ್ಟರ್ ಪಲ್ರ್ಸ್) ಎಂದು ಹೆಸರು. ವರ್ಣಸ್ಫುರಿತ ಧೃತಿಲೇಪನ ಹೊಂದಿ, ಅತಿಬೆಲೆಬಾಳುವ ಮುತ್ತುಗಳು ಪಿಂಕ್‍ಟಡ ವರ್ಗದ ಸಮುದ್ರಜೀವಿ ಮೃದ್ವಂಗಿಗಳಿಂದ ಉತ್ಪತ್ತಿ ಆಗುತ್ತವೆ. ಇಂಥ ಹೊಳಪುಳ್ಳ ಮುತ್ತುಗಳನ್ನು ನದಿ ಮಾಡುವುಗಳಲ್ಲಿ ಜೀವಿಸುವ ಮಾರ್ಗರಿಟೆಫೆರ, ಯೂನಿಯೋ, ಎಲ್ಲಿಪ್ಟಿಯೋ ಕ್ವಾಡ್ರುಲ ಮುಂತಾದ ವರ್ಗಗಳ ಮೃದ್ವಂಗಿಗಳು ಉತ್ಪತ್ತಿ ಮಾಡುತ್ತವೆ.
ಮುತ್ತುಗಳು ಮೃದ್ವಂಗಿಯ ಶರೀರದ ಆರು ಮುಖ್ಯ ಭಾಗಗಳಲ್ಲಿ ಬೆಳೆಯುತ್ತವೆ: 1 ಅಸ್ಥಿರಜ್ಜು ಪ್ರದೇಶ, 2 ಕರುಳಿನ ಮುಂಭಾಗ, 3 ಕರುಳುರೇಖಾ ಪ್ರದೇಶ 4 ಅಭಿಕರ್ಷಕ ಸ್ನಾಯುವಿನ ಮುಂಭಾಗ 5 ಕರುಳಿನ ಹೊರ ಅಂಚುಗಳು ಮತ್ತು 6 ಅಭಿಕರ್ಷಕ ಸ್ನಾಯುವಿನ ಹಿಂಭಾಗ. ವಿವಿಧ ಭಾಗಗಳಲ್ಲಿ ಉತ್ಪತ್ತಿಯಾದ ಮುತ್ತುಗಳು ವಿವಿಧ ತೆರನಾಗಿರುತ್ತದೆ. ಅಸ್ಥಿರಜ್ಜು ಪ್ರದೇಶ ಮತ್ತು ಕರುಳಿನ ಅಂಚಿನ ಭಾಗಗಳಲ್ಲಿ ಮೃದ್ವಂಗಿ ತನ್ನ ದ್ರವವನ್ನು ಸ್ರವಿಸುವುದರಿಂದ ಅಲ್ಲಿ ಉತ್ಪತ್ತಿಯಾದ ಮುತ್ತುಗಳು ಕೆಂಪು ಇಲ್ಲವೆ ನಸುಕಷ್ಟು ಬಣ್ಣದಿಂದ ಕೂಡಿರುತ್ತದೆ. ಮೃದ್ವಂಗಿಯ ಕರುಳು ಮತ್ತು ಕರುಳಿನ ಹೊರಭಾಗ ಹಾಗೂ ಮಾಂಸಖಂಡಗಳ ಮಧ್ಯ ಭಾಗಗಳಲ್ಲಿ ಬೆಳೆದಂಥ ಮುತ್ತುಗಳು ಅತ್ಯಂತ ಹೊಳಪಿನ ಹೊರಪದರವನ್ನು ಹೊಂದಿ ಬಲುವಿಶಿಷ್ಟವಾದ ಮುತ್ತುಗಳೆನಿಸುತ್ತವೆ. ಜೀವಿಯ ಸ್ರಾವಕೋಶ ಮತ್ತು ಸ್ನಾಯುಗಳ ಸಮೀಪದಲ್ಲಿ ಬೆಳೆದ ಮುತ್ತುಗಳು ಧೃತಿಯ ಲೇಪನಗಳಿಂದ ಒಡಗೂಡಿ ಜೋಡಿ ಅಥವಾ ಕೆಲವೊಮ್ಮೆ ಸಂಯುಕ್ತ ಮುತ್ತುಗಳಾಗಿ ಬೆಳೆಯುವುದುಂಟು.
ಮುತ್ತಿನ ಆಕಾರ ಮೃದ್ವಂಗಿಯ ಯಾವ ಭಾಗದಲ್ಲಿ ಬೆಳೆಯಿತೆಂಬುದನ್ನು ಅವಲಂಬಿಸಿದೆ. ಪೂರ್ಣಬೆಳೆವಣಿಗೆ ಹೊಂದಿ, ಚೆಂಡಿನ ಆಕಾರದಲ್ಲಿರುವ ಮುತ್ತು ಜೀವಿಯ ಕರುಳಿನ ಹಿಂಭಾಗ ಮತ್ತು ಮಾಂಸಖಂಡಗಳ ಮಧ್ಯ ಬೆಳೆವಂಥದು. ಏಕೆಂದರೆ ಮುತ್ತು ಉಲ್ಬಣಗೊಳ್ಳುವಾಗ ಯಾವ ಅಡೆತಡೆಯೂ ಇಲ್ಲದೆ ತನ್ನ ದುಂಡನೆಯ ಆಕಾರವನ್ನು ಉಳಿಸಿಕೊಂಡಿರುತ್ತದೆ. ಕರುಳಿನ ಅಂಚುಗಳಲ್ಲಿ ಬೆಳೆದ ಮುತ್ತುಗಳು ಉಲ್ಬಣಗೊಳ್ಳುವಾಗ ಅಕ್ಕಪಕ್ಕದ ಸ್ನಾಯುಗಳಿಂದ ಅದುಮಲ್ಪಟ್ಟು ಅಂಡಾಕಾರ ಇಲ್ಲವೆ ಉದ್ದವಾಗಿ ಮಾರ್ಪಾಡಾಗುತ್ತವೆ. ಅಭಿಕರ್ಷಕ ಸ್ನಾಯುಗಳ ಮಧ್ಯೆ ಬೆಳೆವ ಮುತ್ತುಗಳು ತಮ್ಮ ಬೆಳೆವಣಿಗೆಯ ಹಂತದಲ್ಲಿ ಅತಿ ಹೆಚ್ಚಿನ ಒತ್ತಡಗಳಿಗೆ ಈಡಾಗಿ ಅಸಮರೂಪ ತಳೆದು ವಕ್ರವಕ್ರವಾಗಿ ಬೆಳೆಯುತ್ತದೆ. ಇಂಥ ವಕ್ರರೀತಿಯ ಮುತ್ತುಗಳಿಗೆ ವಿಕೃತರೂಪ ಮುತ್ತುಗಳೆಂದು ಹೆಸರು.
ಅಭಿವರ್ಧಿಸಿದ ಮುತ್ತುಗಳು: ಚೀನದಲ್ಲಿ ಕ್ರಿ.ಶ. 13ನೆಯ ಶತಮಾನದಿಂದಲೂ ಮೃದ್ವಂಗಿಗಳನ್ನು ಸಾಕಿ, ಬೆಳೆಸಿ, ಅವುಗಳಿಂದ ಮುತ್ತುಗಳನ್ನು ಪಡೆಯುವುದು ನಡೆದಿದೆ. ಮೊತ್ತಮೊದಲಿಗೆ ಹೂ ಚೌ ಎಂಬಲ್ಲಿ ಯೆ-ಜಿನ್-ಯಾಗರ್ ಎಂಬ ನದಿ ಮಡುವುಗಳಲ್ಲಿ ಜೀವಿಸುವ ಮೃದ್ವಂಗಿಗಳನ್ನು ಹಿಡಿದು ಅವುಗಳ ದೇಹದೊಳಕ್ಕೆ ಮರದ ಚೂರು, ಕೊಂಬಿನ ಚೂರು, ಎಲುಬು, ಹಿತ್ತಾಳೆಚೂರು ಮುಂತಾದುವನ್ನು ಚಿಪ್ಪಿನಬಾಯಿ ಬಿಡಿಸಿಹಾಕಿ ಪುನಃ ಅವನ್ನು ಮತ್ತೆ ಮಡುವಿನಲ್ಲಿ ಬಿಟ್ಟು ಸಾಕಿದ. ಮೂರುವರ್ಷಗಳ ಅನಂತರ ಆ ಪದಾರ್ಥಗಳ ಸುತ್ತ ಬೆಳೆದಿದ್ದ ಉತ್ತಮ ಧೃತಿಲೇಪನ ಹೊಂದಿದ್ದ ಮುತ್ತುಗಳನ್ನು ಪಡೆದ. ಇದೇ ರೀತಿ ಗೌತಮಬುದ್ಧನ ಸಣ್ಣ ಸಣ್ಣ ಲೋಹವಿಗ್ರಹಗಳನ್ನು ಮೃದ್ವಂಗಿಗಳ ದೇಹದೊಳಕ್ಕಿಟ್ಟು ಮುತ್ತಿನ ವಿಗ್ರಹವನ್ನು ಪಡೆದಿದ್ದಾರೆಂದು ತಿಳಿದುಬಂದಿದೆ. ಬೆಳೆಸಿದ. ಮುತ್ತುಗಳು ಸಾಮಾನ್ಯವಾಗಿ ಅರ್ಧಗೋಳಾಕಾರದಲ್ಲಿರುವುದರಿಂದ ಅಂಥದೇ ಮತ್ತೊಂದು ಮುತ್ತನ್ನು ಅದರೊಂದಿಗೆ ಸೇರಿಸಿ ಬೆಸೆದು ಪೂರ್ಣಗೋಳಾಕಾರದ ಮುತ್ತುಗಳನ್ನು ತಯಾರುಮಾಡುತ್ತಾರೆ. ಜಪಾನಿನಲ್ಲಿ ಏಗೋ ಬೇ ಕಡಲತೀರದಲ್ಲಿ ಸುಮಾರು 32 ಕಿಲೋಮೀಟರುಗಳ ದೂರಕ್ಕೆ 300ಕ್ಕೆ ಹೆಚ್ಚು ಮುತ್ತು ಸಾಕಾಣಿಕೆ ಕೇಂದ್ರಗಳಿವೆ. ನದೀಮಡುವಿನಲ್ಲಿ ಬೆಳೆಸಿದ ಮುತ್ತುಗಳ ಪೈಕಿ ಅನೊಡಾಂಟ್ ಜಪಾನಿಕ ಎಂಬ ವರ್ಗದ ಮುತ್ತುಗಳು ಪ್ರಪಂಚದ ಮುತ್ತು ಮಾರುಕಟ್ಟೆಯಲ್ಲಿ ಬಲು ಪ್ರಖ್ಯಾತಿ ಪಡೆದಿವೆ.
ಕೃತಕ ಮುತ್ತುಗಳು: ಕ್ರಿ.ಶ. 1680ರಲ್ಲಿ ಫ್ರಾನ್ಸ್‍ನಲ್ಲಿ ಜಾಕ್ವಿನ್ ಎಂಬಾತ ಬೆಳ್ಳಿಯಂತೆ ಹೊಳಪುಳ್ಳ, ಬ್ಲೀಕ್ ಎಂಬ ವರ್ಗದ ಮೀನುಗಳ ಚರ್ಮದ ಮೇಲಿನ ಕಣಗಳಿಂದ ಎಸ್ಸೆನ್ಸ್-ಡಿ-ಓರಿಯಂಟ್ ಎಂಬ ದ್ರಾವಣವನ್ನು ತಯಾರಿಸಿ ಗೋಳಾಕಾರದ ಸಣ್ಣ ಸಣ್ಣ ಅಲಬಾಸ್ಟರ್ ಗಾಜಿನ ಮಣಿಗಳಿಗೆ ಬಳಿದು ಕೃತಕಮುತ್ತುಗಳನ್ನು (ಆರ್ಟಿಫಿಶಿಯಲ್ ಪಲ್ರ್ಸ್) ತಯಾರಿಸಿದ. ಈ ಮುತ್ತುಗಳು ಮೇಲು ನೋಟಕ್ಕೆ ನೈಸರ್ಗಿಕ ಮತ್ತು ಬೆಳೆಸಿದ ಮುತ್ತುಗಳಂತೆ ಇರುತ್ತವಲ್ಲದೆ ವ್ಯತ್ಯಾಸಗಳನ್ನು ಪತ್ತೆಮಾಡುವುದು ಕಷ್ಟಸಾಧ್ಯ. ಈಗ ಕೃತಕಮುತ್ತುಗಳನ್ನು ಬೇರೆ ಬೇರೆ ವಿಧಾನಗಳಿಂದ ತಯಾರಿಸುವುದಿದೆ. ಬಿಳಿಬಣ್ಣದ, ನಸುನೇರೆಳೆ ಮತ್ತು ಗುಲಾಬಿ ಬಣ್ಣದ ಮುತ್ತುಗಳನ್ನು ಶಂಖುಚಿಪ್ಪು ಮತ್ತು ಹವಳಗಳಿಂದಲೂ ಕಪ್ಪು ಬಣ್ಣದ ನಕಲಿ ಮುತ್ತುಗಳನ್ನು ಹಿಮಟೈಟ್ ಖನಿಜದ ಹರಳುಗಳಿಂದಲೂ ತಯಾರಿಸುತ್ತಾರೆ.
ಮುತ್ತುಗಳ ಪರೀಕ್ಷೆ: ಮುತ್ತುಗಳನ್ನು ಪರೀಕ್ಷಿಸುವ ಯಂತ್ರಕ್ಕೆ ನೆಕ್ರೆಸ್ಕೋಪ್ ಎಂದು ಹೆಸರು. ಎಕ್ಸ್‍ಕಿರಣಗಳ ಸಹಾಯದಿಂದ ಮನುಷ್ಯನ ದೇಹದೊಳಗಿನ ಎಲುಬುಗಳನ್ನು ನೋಡುವಂತೆಯೇ ನೆಕ್ರೆಸ್ಕೋಪಿನ ಸಹಾಯದಿಂದ ಮುತ್ತುಗಳ ಪರೀಕ್ಷೆ ನಡೆಸುತ್ತಾರೆ. ಈ ಉಪಕರಣದಲ್ಲಿ ಇರುವ ವಿದ್ಯುತ್ ದೀಪದಿಂದ ಹೊರಟ ಕಿರಣಗಳು ಮುತ್ತಿನ ಪದರಗಳ ಮೂಲಕ ಹಾದು ಒಳಗಿರುವ ನ್ಯೂಕ್ಲಿಯಸ್ ಮಾತೃಕೆ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಮಾತೃಕೆ ಕಪ್ಪಾಗಿ ಕಾಣುತ್ತಿದ್ದು ಚಿಕ್ಕದಾಗಿದ್ದಲ್ಲಿ ಆ ಮುತ್ತು ಪ್ರಕೃತಿ ಜನ್ಯವೆಂತಲೂ ದೊಡ್ಡದಾಗಿದ್ದಲ್ಲಿ ಅಭಿವರ್ಧಿಸಿದ ಮುತ್ತೆಂದೂ ತಿಳಿಯಬಹುದು. ಅದೇ ದೀಪದ ಪ್ರಕಾಶದಲ್ಲಿ ಮುತ್ತನ್ನು ತಿರುಗಿಸುತ್ತ ಹೋದರೆ ಮಾತೃಕೆಯ ಕಪ್ಪುಭಾಗ ಕಡಿಮೆಯಾದಲ್ಲಿ ಅಭಿವರ್ಧಿಸಿದ ಮುತ್ತೆಂದೂ ಸ್ವಲ್ಪವೂ ಕಡಿಮೆಯಾಗದೆ ಹಾಗೆ ಉಳಿದಿದ್ದ ಪಕ್ಷದಲ್ಲಿ ಪ್ರಕೃತಿಜನ್ಯ ಮುತ್ತೆಂದೂ ಪರಿಗಣಿಸುವುದಿದೆ.
ಪ್ರಶಸ್ತಮುತ್ತುಗಳ ಲಭ್ಯಸ್ಥಳಗಳು: ವಿಶಿಷ್ಟವಾದ, ಹೊಳಪುಳ್ಳ ಉತ್ತಮ ದರ್ಜೆಯ ಮುತ್ತುಗಳು ಪರ್ಷಿಯ ಖಾರಿಯಲ್ಲಿ ಓಮನ್‍ನಿಂದ ಕ್ವಾಟಾರ್‍ವರೆಗೆ ಹಬ್ಬಿರುವ ಗ್ರೇಟ್‍ಬೈಟ್ ಎಂಬ ಕಡಲತಿರುವಿನಲ್ಲಿ ವಿಪುಲವಾಗಿ ದೊರೆಯುತ್ತವೆ. ಅತ್ಯುತ್ತಮ ಮುತ್ತುಗಳು ಬೆಹರಿನ್ ದ್ವೀಪದಲ್ಲಿ ಸಿಗುತ್ತವೆ. ಇರಾನಿನ ಪ್ರಖ್ಯಾತ ಬಂದರಾಗಿರುವ ನಗರ್‍ಲಿಂಗ್ಲೆ ಮುತ್ತುಗಳಿಗೆ ಪ್ರಸಿದ್ಧಮಾರಾಟಸ್ಥಳ. ಅಧಿಕ ಪ್ರಕಾಶವುಳ್ಳ ಮುತ್ತುಗಳು ಶ್ರೀಲಂಕಾದ ಮನ್ನಾರ್ ಕೊಲ್ಲಿಯಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಆಫ್ರಿಕದಲ್ಲಿ eóÁನ್ಸಿಬಾರ್ ದ್ವೀಪದಿಂದ ಮೊಜಾಂಬಿಕ್‍ನ ಇನಹ್ಯಾಂಟೇನ್‍ವರೆಗಿರುವ ಕಡಲತೀರದಲ್ಲಿ ದೊರೆವ ಮುತ್ತುಗಳು ಬಲು ಉತ್ಕøಷ್ಟವಾದುವು. ಆಕರ್ಷಕ ಬಣ್ಣ ಮತ್ತು ರಂಗಿಗೆ ಪ್ರಸಿದ್ಧಿ ಪಡೆದ ಮುತ್ತುಗಳು ಆಗ್ನೇಯ ಏಷ್ಯದ ಸಿಲೆಬಿಸ್ ದ್ವೀಪದಲ್ಲಿ ಸಿಗುತ್ತವೆ. ಅತಿ ಬಿಳುಪು ಛಾಯೆಯುಳ್ಳ ಮುತ್ತುಗಳು ಆಸ್ಟ್ರೇಲಿಯದ ಪಶ್ಚಿಮತೀರದಲ್ಲೂ ಅತಿದೊಡ್ಡವೆನಿಸುವ ಚಪ್ಪಟೆಯಾಕಾರದ, ವಿಶಿಷ್ಟ ಮೆರುಗು ಹೊಂದಿರುವ, ಹೆಚ್ಚು ಬೆಲೆಬಾಳುವ ಮುತ್ತುಗಳು ಉತ್ತರತೀರದಲ್ಲೂ ದೊರೆಯುತ್ತವೆ. ಇದೇ ತೆರನಾದ ಉತ್ತಮದರ್ಜೆಯ ಮುತ್ತುಗಳು ಪೆಸಿಫಿಕ್ ಸಾಗರದ ದಕ್ಷಿಣಭಾಗದ ದ್ವೀಪಗಳಲ್ಲೂ ಲಭ್ಯ ಉಂಟು ಸಮುದ್ರದಲ್ಲಿ ಮುಳುಗು ಹಾಕಿ ಮುತ್ತುಗಳನ್ನು ಆರಿಸಿ ಹೊರತರುವುದರಲ್ಲಿ ಆಸ್ಟ್ರೇಲಿಯದ ಗಂಡಸರೂ ಹೆಂಗಸರೂ ಬಲು ನಿಸ್ಸೀಮರು.
ಅಮೆರಿಕದ ಕ್ಯಾರಿಬಿಯನ್, ಕ್ಯಾಲಿಪೊರ್ನಿಯ ಮತ್ತು ಮೆಕ್ಸಿಕೋ ಖಾರಿಗಳಲ್ಲಿ ಲೋಹದಂತೆ ಹೊಳೆಯುವ, ಕಪ್ಪುಮುತ್ತುಗಳು ಹಾಗೂ ಬಿಳಿಮುತ್ತುಗಳು ದೊರೆಯುತ್ತವೆ. ಮಿಸಿಸಿಪಿ ಮತ್ತು ಅದರ ಉಪನದಿಗಳ ತೀರದಲ್ಲಿ ಯೂನಿಯೋ ಮಾರ್ಗರಿಟಫೆರ ಎಂಬ ವರ್ಗದ ಮೃದ್ವಂಗಿಗಳಿಂದ ಉತ್ಪಾದಿಸಲ್ಪಟ್ಟ ಶ್ರೇಷ್ಠ ಮಟ್ಟದ ಮುತ್ತುಗಳು ಸಿಗುತ್ತದೆ. ಸ್ಕಾಟ್ಲೆಂಡಿನ ಸ್ಪೆಯ್ ಮತ್ತು ಟೆಯ್ ನದೀತೀರಗಳಲ್ಲಿ ಮತ್ತು ನಾರ್ತ್‍ವೇಲ್ಸ್‍ನ ಕಾನವೇ ನದೀತೀರದಲ್ಲಿ ದೊರೆಯುವ ಮುತ್ತುಗಳಿಗೆ ಇರುವ ಬೇಡಿಕೆ ಬಲು ಹೆಚ್ಚು. ಬವೇರಿಯ ಕಾಡಿನ ಹೊಳೆಗಳಲ್ಲಿ ಬಲು ಉತ್ಕøಷ್ಟವಾದ ಮುತ್ತುಗಳು ದೊರೆಯುತ್ತವೆ. ಮುತ್ತುಗಳ ಮಾರಾಟ ಮಧ್ಯ ಯೂರೊಪಿನಲ್ಲಿ ಇಂದಿಗೂ ಲಾಭದಾಯಕವಾದ ಉದ್ಯೋಗವೆನಿಸಿದೆ. ಚೀನದಲ್ಲಿ ಕ್ರಿ.ಪೂ 2000 ವರ್ಷಗಳ ಹಿಂದಿನಿಂದಲೂ ಮುತ್ತುಗಳನ್ನು ಹೊರತೆಗೆದು ಸಂಗ್ರಹಿಸಿ ಮಾರಾಟಮಾಡುತ್ತಿದ್ದಾರೆ.
ಪ್ರಖ್ಯಾತ ಮುತ್ತುಗಳು: ಪ್ರಪಂಚದಲ್ಲಿ ಕೆಲವು ಮುತ್ತುಗಳು ಅವುಗಳ ಗಾತ್ರ, ಸೌಂದರ್ಯ ಮತ್ತು ಚಾರಿತ್ರಿಕ ಗುಣಗಳಿಗೆ ಹೆಸರುಗಳಿಸಿವೆ. ಲಾರಿನ್-ಡೆಸ್-ಪಾರ್‍ಲೆರ್ ಎಂಬ ಓರಿಯಂಟಲ್ ಮತ್ತು (27.6 ಕ್ಯಾರೆಟ್ ತೂಕ) ಫ್ರೆಂಚ್ ಚಕ್ರವರ್ತಿಯ ಕಿರೀಟವನ್ನು ಅಲಂಕರಿಸಿತ್ತು. ಇದು ಕ್ರಿ.ಶ. 1792ರಲ್ಲಿ ಅಪಹೃತವಾಯಿತು. ಅಂಡಾಕಾರದ ಲಾ-ರಿಜೆಂಟ್ ಎಂಬ (34 ಕ್ಯಾರಟ್ ತೂಕ) ಮುತ್ತನ್ನು ಓರ್ವ ಫ್ರೆಂಚ್ ಅಧಿಕಾರಿ ಹೊಂದಿದ್ದ, ಭಾರತದಲ್ಲಿ ದೊರೆತ ಲಾ ಪೆಲ್ಲಗ್ರಿನ (28 ಕ್ಯಾರಟ್ ತೂಕ) ಎಂಬ ದುಂಡಗಿನ, ಅತಿ ಸೌಂದರ್ಯದ ಮುತ್ತು ಈಗ ರಷ್ಯದ ಮಾಸ್ಕೊ ನಗರದ ಮ್ಯೂಸಿಯಮ್ಮಿನಲ್ಲಿದೆ. ಪ್ರಪಂಚದಲ್ಲೇ ಅತಿದೊಡ್ಡದಾದ 454 ಕ್ಯಾರಟ್ ತೂಕದ. ಸುಮಾರು 11 ಸೆಂಮೀ ಸುತ್ತಳತೆ ಮತ್ತು 5 ಸೆಂಮೀ ಉದ್ದದ ಮುತ್ತು ಹೆನ್ರಿ ತಾಮಸ್ ಹೋಪ್ ಎಂಬವರ ಬಳಿ ಇದೆ. ಅಮೆರಿಕದ ಪೀಟರ್ ಸನ್ ಬಳಿ ಇರುವ ನಾಚ್‍ಬ್ರೂಕ್ ಎಂಬ ಝರಿಯಲ್ಲಿ 1857ರಲ್ಲಿ ದೊರೆತ ನಸುನೇರಳೆ ಬಣ್ಣದ 23.25 ಕ್ಯಾರಟ್ ತೂಕದ ರಾಣಿ ಮುತ್ತು ಈಗ ಯೂಗಿನಿಯ ಚಕ್ರವರ್ತಿನಿಯ ಬಳಿ ಇದೆ.
ಭಾರತದಲ್ಲಿ ಚಂದ್ರನನ್ನು ಮುತ್ತಿಗೆ ಅಧಿದೇವತೆಯಾಗಿ ಪರಿಗಣಿಸುವುದಿದೆ. ಮುತ್ತನ್ನು ಆಭರಣ ರೂಪದಲ್ಲಿ ಧರಿಸಿದವರಿಗೆ ಅದರ ಅಧಿದೇವತೆ ಚಂದ್ರನಿಂದಕಾಂತಿಯೂ ಮನಃಶಾಂತಿಯೂ ಲಭಿಸುವುದೆಂಬ ಪ್ರತೀತಿ ಇದೆ.
(ಎಂ.ಜೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ